ಶನಿವಾರ, ನವೆಂಬರ್ 23, 2013

ನಂದಿ


ನಂದಿ ಎಂದಾಕ್ಷಣ ಬೆಂಗಳೂರಿನ ಸಮೀಪ ಇರುವ ನಂದಿ ಬೆಟ್ಟ, ಅಲ್ಲಿನ ತಂಪು ವಾತಾವರಣ, ಟಿಪ್ಪೂ ಡ್ರಾಪ್ ಹಾಗೂ ಸ್ವಾತಂತ್ರ ಪೂರ್ವದಲ್ಲಿ ಮಹಾತ್ಮಗಾಂಧಿ ತಂಗಿದ್ದ ಅತಿಥಿಗೃಹ ಕಣ್ಮುಂದೆ ಸುಳಿಯುತ್ತವೆ.. ಇದೇ ನಂದಿಯ ಈಶಾನ್ಯ ದಿಕ್ಕಿನಲ್ಲಿ 'ನಂದಿಗ್ರಾಮ' ಎನ್ನುವ ಹಳ್ಳಿ ಇದೆ. ಇಲ್ಲಿ ಭೋಗನಂದೀಶ್ವರ, ಅರುಣಾಚಲೇಶ್ವರ ಎಂಬ ೮ನೇ ಶತಮಾನಕ್ಕೆ ಸೇರಿದ ತುಂಬ ಸುಂದರ ಕಲಾತ್ಮಕ ಕೆತ್ತನೆಗಳಿಂದ ಕೂಡಿರುವ ಅವಳಿ ದೇವಸ್ಥಾನಗಳಿವೆ.
ವಿಶಾಲ ಪ್ರಾಂಗಣದ ಮಧ್ಯೆ ಎದ್ದು ನಿಂತಿರುವ ಈ ದೇವಾಲಯಗಳೆರಡೂ ಅನೇಕ ಐತಿಹಾಸಿಕ ಕೌತುಕಗಳನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿವೆ. ದೇವಸ್ಥಾನಕ್ಕೆ ಸೇರಿದಂತಿರುವ ಸುಂದರ-ಕಲಾತ್ಮಕ ಪುಷ್ಕರಣಿಯಂತೂ ತುಂಬ ಮನಮೋ ಹಕವಾಗಿದೆ. ದೇವರ ಕಲ್ಯಾಣೋ ತ್ಸವಕ್ಕೆಂದು ಕಟ್ಟಿಸಿರುವ ಮಂಟಪವೂ ಅತ್ಯಂತ ಸುಂದ ರವಾಗಿದೆ. ಇದು ಬೆಂಗಳೂರಿಗೆ ಕೇವಲ 55ಕಿಮಿ ದೂರದಲ್ಲಿದೆ.

ಪ್ರವೇಶ

ಪ್ರವೇಶ ದ್ವಾರದಿಂದ ಒಳ ಹೋಗುತ್ತಲೇ ವಿಶಾಲವಾದ ಸುಮಾರು ೩೦೦ಮೀ ಉದ್ದವಿರುವ ರಥಬೀದಿ ಸಿಗುತ್ತದೆ. ಇದರ ಇಕ್ಕೆಲಗಳಲ್ಲಿ ಭಕ್ತಾದಿಗಳಿಗೆ ತಂಗಲು ನಿರ್ಮಿಸಿದ್ದ ಕೈಸಾಲೆಗಳು, ಅದರ ನಂತರ ನಂದೀಶ್ವರ ಮತ್ತು ಅರುಣಾಚಲೇಶ್ವರ ದೇವಾಲಯಗಳ ಸಮುಚ್ಚಯದ ಗೋಪುರ ಸಹಿತ ಪ್ರವೇಶದ್ವಾರ ಎದುರಾಗುತ್ತದೆ. ಈ ಮೂಲಕ ಒಳಪ್ರವೇಶಿಸುತ್ತಿದ್ದಂತೆ ಒಮ್ಮೆಲೇ ಮನಸೂರೆಗೊಳ್ಳುವ ಕಲಾತ್ಮಕ ಕೆತ್ತನೆ ಗಳಿಂದೊಡಗೂಡಿದ ನಂದಿ ಮಂಟಪ, ನವರಂಗ, ಸುಕನಾಸಿ ಹಾಗೂ ದೇವರ ಗರ್ಭಗೃಹಗಳು ಇದಿರಾಗುತ್ತವೆ. ಭೋಗನಂದೀಶ್ವರನ ಗರ್ಭಗೃಹ ಬಾಗಿಲ ಮೇಲಿರುವ ಚಿತ್ರಪಟ್ಟಿಕೆಗಳಂತೂ ಶಿಲ್ಪ ಕಲಾ ವೈಭವವನ್ನೇ ಸಾರುತ್ತವೆ. ಅದರಲ್ಲಿ ಬಿಡಿಸಿರುವ ಲತಾಗುಚ್ಛ, ಗಿಣಿ-ಪಕ್ಷಿಗಳು ಹೂ-ಬಳ್ಳಿಗಳು ನೋಡುಗರನ್ನು ಮಂತ್ರ ಮುಗ್ಧವಾಗಿಸುತ್ತವೆ. ಗರ್ಭಗೃಹದ ಮುಂದಿರುವ ನವರಂಗದ ನಾಲ್ಕೂ ಮೂಲೆಗಿರುವ ಕಲ್ಲಿನ ಕಂಬಗಳ ಕುಸುರಿ ಕೆಲಸವಂತೂ ಮನಸೆಳೆಯುವಂತಿದೆ. (ಈ ಕಂಬಗಳಿಗೆ ಸಂಬಂಧಿಸಿದಂತೆ ಐತಿಹಾಸಿಕ ಘಟನೆಯೊಂದಿದೆ).
ಇತಿಹಾಸ
ಸ್ವಲ್ಪವಾದರೂ ಐತಿಹಾಸಿಕ ಪ್ರಜ್ಞೆ ಇರುವವರಿಗೆ ಈ ದೇವಾಲಯಗಳ ಸಮುಚ್ಚಯವನ್ನು ನೋಡಿದಾಕ್ಷಣ ಮನಸ್ಸನಲ್ಲಿ ಪ್ರಶ್ನೆಯೊಂದು ಮೂಡುತ್ತದೆ. ಕ್ರಿ..806ನೇ ಇಸ್ವಿಯ ರಾಷ್ಟ್ರಕೂಟರ ತಾಮ್ರಶಾಸನವೊಂದರಲ್ಲಿ ಈ ದೇವಾಲಯದ ಉಲ್ಲೇಖವಿದೆ. ಅಂದರೆ ಇದು ಅದಕ್ಕಿಂತ ಹಿಂದಿನದ್ದಾದಿರಬೇಕು. ಅಷ್ಟು ಹಿಂದೆ ದಕ್ಷಿಣ ಕರ್ನಾಟಕದ ಈ ಭಾಗದಲ್ಲಿ ದ್ರಾವಿಡ ಶ್ಯೆಲಿಯ ಇಂಥ ಅದ್ಭುತ ದೇವಾಲಯ ಇರುವುದು ಒಂದು ಅಚ್ಚರಿಯ ವಿಷಯವೇ ಸರಿ. ಇದಕ್ಕೆ ಆಗಿನ ಕಾಲದಲ್ಲಾದ ರಾಜಕೀಯ ವಿಪ್ಲವಗಳ ಕಾರಣವೊಂದಿದೆ. ಕ್ರಿ..810ರಲ್ಲಿ ದೊರೆತ ತಾಮ್ರಶಾಸನದಿಂದ ಈ ದೇವಾಲಯ ಸಂಕೀರ್ಣವನ್ನು ಆಗಿನ ಬಾಣ ವಂಶದ ರಾಜ ಬಾಣ ವಿದ್ಯಾಧರನ ರಾಣಿ ರತ್ನಾವಳಿ ಎಂಬುವವಳು ಕಟ್ಟಿಸಿದಳೆಂದು ತಿಳಿದು ಬರುತ್ತದೆ.
ಇತಿಹಾಸದ ಆಗಿನ ಕಾಲಘಟ್ಟದಲ್ಲಿ ಬಾದಾಮಿ ಚಾಲುಕ್ಯರು ಸಾರ್ವಭೌಮತ್ವವನ್ನು ಹೊಂದಿದ್ದರೆಂಬುದು ಎಲ್ಲರಗೂ ತಿಳಿದದ್ದೇ. ಇವರು ದಕ್ಷಿಣದವರೆಗೆ ದಂಡೆತ್ತಿ ಬಂದು ಪಲ್ಲವರನ್ನು ಸೋಲಿಸಿದರು. ಅಲ್ಲಿಂದ ಹಿಂತಿರುಗುವಾಗ ಅಲ್ಲಿನ ಶಿಲ್ಪಿಗಳನ್ನು ಜತೆಗೇ ಕರೆದೊಯ್ದುರು. ಹೀಗೆ ಕರೆತಂದ ಶಿಲ್ಪಿಗಳಿಂದ ಪಟ್ಟದಕಲ್ಲಿನಲ್ಲಿ ಶಿಲ್ಪಕಲಾ ಸಮುಚ್ಚಯವೊಂದನ್ನು ಸೃಷ್ಟಿಸಿರುವುದನ್ನು ಇಂದಿಗೂ ಕಾಣಬಹುದು. ಕಾಲಾನುಕ್ರಮದಲ್ಲಿ ಜರುಗಿದ ರಾಜಕೀಯ ಚದುರಂಗದಾಟದಲ್ಲಿ ಚಾಲುಕ್ಯರನ್ನು ಸೋಲಿಸಿದ ರಾಷ್ಟ್ರಕೂಟರ ಕೈ ಮೇಲಾಯಿತು. ಈ ಕಾಲಘಟ್ಟದಲ್ಲಿ ತಮಿಳುನಾಡಿನಿಂದ ಬಂದಿದ್ದ ಶಿಲ್ಪಿಗಳು ಬದಲಾದ ರಾಜಕೀಯ ಸ್ಥಿತ್ಯಂತರದಿಂದ ಆಶ್ರಯವಿಲ್ಲದಂತಾಗಿ ಮತ್ತೆ ತಿರುಗಿ ತಮಿಳುನಾಡಿಗೆ ಗುಳೆ ಹೊರಟರು. ಹೀಗೆ ಬರುವಾಗ ದಾರಿಮಧ್ಯೆ ಸಿಗುವ ಕೋಲಾರ ಪ್ರಾಂತದಲ್ಲಿ ಆ ಗ ಆಳುತ್ತಿದ್ದ ಬಾಣದೊರೆಗಳು ಇವರಿಗೆ ಆಶ್ರಯ ನೀಡಿ ನಂದಿಯಲ್ಲಿ ಈ ಅನುಪಮವಾದ ಅರುಣಾಚಲೇಶ್ವರ-ಭೋಗನಂದೀಶ್ವರ ದೇವಾಲಯಗಳನ್ನು ಕಟ್ಟಿಸಿದರೆಂದು ಇತಿಹಾಸ ಹೇಳುತ್ತದೆ.
ತದನಂತರ ಬಾಣರನ್ನು ಸೋಲಿಸಿ ನೊಳಂಬರು ಪ್ರವರ್ಧಮಾನಕ್ಕೆ ಬಂದರು. ಅತ್ತ ತಮಿಳುನಾಡಿನಲ್ಲೂ ಚೋಳರ ಕೈ ಮೇಲಾಗಿ ರಾಜರಾಜ ಚೋಳ ಸಾಮ್ರಾಜ್ಯ ವಿಸ್ತರಣೆಯ ಉತ್ಸಾಹದಲ್ಲಿ ನೊಳಂಬರ ಮೇಲೆ ಆಕ್ರಮಣ ಮಾಡಿದ. ಆಗ ನಂದಿಯಲ್ಲಿರುವ ನಂದೀಶ್ವರ ಮತ್ತು ಅರುಣಾಚಲೇಶ್ವರ ದೇವಾಲಯದ ನವರಂಗದಲ್ಲಿದ್ದ ನಾಲ್ಕು ಕಲಾತ್ಮಕ ಕೆತ್ತನೆ ಕಂಬಗಳು ಅವನನ್ನು ಬಹುವಾಗಿ ಆಕರ್ಷಿಸಿದವು. ಅದೇ ಸಮಯದಲ್ಲಿ ತಿರುವಾರೂರಿನಲ್ಲಿ ತಾನು ನಿರ್ಮಿಸುತ್ತಿದ್ದ ದೇವಾಲಯವೊಂದಕ್ಕೆ ಆ ನಾಲ್ಕೂ ಕಂಬಗಳನ್ನು ಸಾಗಿಸಿದ. ಹೀಗೆ ಮಾಡಿದ ರಾಜರಾಜ ಚೋಳನಿಗೆ ಪಾಪಭೀತಿ ಶುರುವಾಗುತ್ತದೆ. ಆತ್ಮಸಾಕ್ಷಿಗೆ ಓಗೊಟ್ಟು ಪಾಪಪ್ರಾಯಶ್ಚಿತ್ತಕ್ಕಾಗಿ ನಂದೀಶ್ವರನ ದೇವಾಲಯದ ನವರಂಗದ ಕಂಬವೊಂದರಲ್ಲಿ ತಾನು ಕೈಮುಗಿದು ನಿಂತಿರುವ ಭಂಗಿಯ ಶಿಲ್ಪವೊಂದನ್ನು ನಿಲ್ಲಿಸಿ ಪಾಪ ಮುಕ್ತನಾದನೆಂದು ಹೇಳಲಾಗುತ್ತದೆ. ಹಾಗೆ ಕೈ ಮುಗಿದು ನಿಂತಿರುವ ರಾಜರಾಜ ಚೋಳನ ಮೂರ್ತಿಯನ್ನು ಇಂದಿಗೂ ಕಾಣಬಹುದು.
ಆ ನಂತರದ ನೂರಾರು ವರ್ಷಗಳ ಆಳ್ವಿಕೆಯಲ್ಲಿ ಹಲವಾರು ರಾಜಮನೆತನಗಳು ಈ ದೇವಾಲಯಗಳಿಗೆ ಅಭಿವೃದ್ಧಿ ಸೇವಾಕಾರ್ಯವನ್ನು ಸಲ್ಲಿಸಿವೆ. ಇದರಲ್ಲಿ ವಿಜಯನಗರದ ಅರಸರ ಕಾಣಿಕೆ ಬಹುದೊಡ್ಡದು. ನಂದೀಶ್ವರ ದೇವಾಲಯದ ಪಕ್ಕದಲ್ಲಿ ರುವ ಕಲ್ಯಾಣ ಮಂಟಪ ಹಾಗು ಪುಷ್ಕರಣಿಯ ಕಲಾಕೌಶಲ್ಯ ಮನಮೋಹಕವಾದವು.
ಶಿಲ್ಪ ವೈಭವ
ಭೋಗನಂದೀಶ್ವರ ಹಾಗು ಅರುಣಾಚಲೇಶ್ವರ ಈ ಎರಡೂ ದೇವಸ್ಥಾನಗಳು ಒಂದೇ ತರಹದ ತಳಹದಿಯ ಮೇಲೆ ನಿರ್ಮಿಸಲಾಗಿದೆ. ಎರಡೂದೇವಸ್ಥಾನಗಳು ಸ್ವಲ್ಪ ಹೆಚ್ಚು ಕಡಿಮೆ ಒಂದೇ ವಿಸ್ತಾರವುಳ್ಳವು. ಅಲ್ಲದೇ ನೋಡಲು ಜೋಡಿ ದೇವಸ್ಥಾನಗಳಂತೆ ಇವೆ. ಎರಡರಲ್ಲೂ ಗರ್ಭಗೃಹ,ಸುಕನಾಸಿ, ನಾಲ್ಕು ಕಲಾತ್ಮಕ ಕಂಬಗಳಿಂದ ಕೂಡಿದ ಸಭಾಮಂಟಪಗಳು ಇವೆ. ಇಡೀ ದೇವಸ್ಥಾನದ್ದೇ ಒಂದು ಸೊಬಗಾದರೆ ಕಲಾತ್ಮಕ
ಕಂಬಗಳದ್ದು ಇದನ್ನೂ ಮೀರಿಸುವಂಥದ್ದು. ಚೌಕಾಕಾರದ ಪೀಠದ ಈ ಕಂಬಗಳು ಮೇಲ್ತುದಿಯಲ್ಲಿ ಉರುಳಿಯಾಕಾರದ ದಿಂಡು ಹೊಂದಿವೆ. ಅದರ ಮೇಲೆ ದಿಂಬಿನಾಕಾರದ ಬೋದಿಗೆ. ಮೈಯೆಲ್ಲ ಕಲಾತ್ಮಕ ಕುಸುರಿಕೆತ್ತನೆಯ ನಯಗಾರಿಕೆ. ಒಟ್ಟಿನಲ್ಲಿ ನೋಡುಗನ ಮನಸ್ಸನ್ನು ಥಟ್ಟನೇ ಸೆಳೆಯುವುದಲ್ಲದೆ ಅಚ್ಚಳಿಯದೆ ಉಳಿದುಬಿಡುತ್ತವೆ . ಇನ್ನು ದೇಗುಲದ ಸುತ್ತಲಿನ ಗೋಡೆ ಯಲ್ಲಿ ಮಹಿಷಮರ್ಧಿನಿ,ಕಿರಾತಾರ್ಜುನೀಯ, ನಟರಾಜ, ಶಿವ-ಪಾರ್ವತಿ, ಗಜಸಂಹಾರ ಹಾಗು ತ್ರಿಪುರಾಂಕ ವಿಷ್ಣುವಿನ ಕಲಾನೈಪುಣ್ಯದ ಶಿಲ್ಪಗಳು ಒಡಮೂಡಿವೆ.

ಜಾನಪದ ಹಿನ್ನೆಲೆ

ನಮ್ಮೆಲ್ಲ ಬಹಳಷ್ಟು ಹಳ್ಳಿಗಳಿರುವಂತೆ ನಂದಿಗ್ರಾಮಕ್ಕೂ ಜಾನಪದ ಕಥೆಯೊಂದರ ಹಿನ್ನೆಲೆ ಇದೆ. ಹಿಂದೆ ಈ ಊರ ಜಂಗಮರೊಬ್ಬರಿಗೆ ಯೋಗ-ಭೋಗ ಎಂಬ ಇಬ್ಬರು ಮಕ್ಕಳು ಇದ್ದರಂತೆ. ಹಿರಿಯವನೆ ಭೋಗ. ಇವನೇ ಮನೆಯ ಎಲ್ಲ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ. ಕಿರಿಯವ ಯೋಗ ಮನೆಯ ದನ-ಕರುಗಳನ್ನು ಬೆಟ್ಟಕ್ಕೆ ಕರೆದೊಯ್ದು ಮೇಯಿಸಿಕೊಂಡು ಬರುತ್ತಿದ್ದ. ಕಿರಿಯವನ ಮತ್ತು ಅವನ ಹೆಂಡತಿಯ ಬೇಜವಾಬ್ದಾರಿ ವರ್ತನೆಯನ್ನು ಕಂಡ ಹಿರಿಯವನ ಹೆಂಡತಿಗೆ ಅಸಹನೆ ಉಂಟಾಗುತ್ತದೆ. ಅವಳು ಒಮ್ಮೆ ಕಿರಿಯವನು ಬೆಟ್ಟಕ್ಕೆ ದನಗಳನ್ನು ಮೇಯಿಸಲು ಹೋದಾಗ ಬಾಡಿಗೆ ಬಂಟರನ್ನು ಬಿಟ್ಟು ಕೊಲ್ಲಿಸಿಬಿಡುತ್ತಾಳೆ.ದೇಹವೆರೆಡು ಜೀವವೊಂದೇ ಎಂಬಂತಿದ್ದ ಅಣ್ಣನಿಗೆ ಈ ವಿಷಯ ತಕ್ಷಣಕ್ಕೆ ತಿಳಿದು ಬಿಡುತ್ತದೆ. ಅಲ್ಲದೇ ತಮ್ಮನನ್ನು ಕೊಲ್ಲಿಸಿದ್ದು ತನ್ನ ಹೆಂಡತಿಯಲ್ಲದೆ ಬೇರಾರೂ ಅಲ್ಲ ಎಂಬುದು ತಿಳಿದುಬಿಡುತ್ತದೆ. ಇದರಂದ ಮನನೊಂದು ಅಲ್ಲೇ ಪ್ರಾಣ ಬಿಡುತ್ತಾನೆ. ಇದನ್ನು ಕಂಡ ಅವನ ಹೆಂಡತಿ ದು:ಖದಿಂದ ತಮ್ಮನ ಹೆಂಡತಿಯನ್ನು ಹುಡುಕಿಕೊಂಡು ಹೋಗುತ್ತಾಳೆ. ವಯಸ್ಸಿನಲ್ಲಿ ಇನ್ನೂ ಚಿಕ್ಕವಳಾದ ಅವಳು ಹತ್ತಿರದ ದೇವಸ್ಥಾನವೊಂದರಲ್ಲಿ ಎರಡು ಶಿವಲಿಂಗಗಳೊಂದಿಗೆ ಆಟವಾಡುತ್ತಿರುವುದನ್ನು ಕಾಣುತ್ತಾಳೆ. ತಾನು ಮಾಡಿದ ಕೃತ್ಯಕ್ಕೆ ಆತ್ಮಸಾಕ್ಷಿಪೂರಕವಾಗಿ ಪರಿತಾಪ ಪಡುತ್ತಾಳೆ. ಆಗ ಆವಳು ಪಟ್ಟ ಪ್ರಾಯಶ್ಚಿತ್ತದ ಫಲವೊ ಎಂಬಂತೆ ಆ ಎರಡೂ ಲಿಂಗಗಳಿಗೆ ಜೀವ ಬಂದು ಅಣ್ಣ-ತಮ್ಮಂದಿರಾಗಿ ಪ್ರತ್ಯಕ್ಷರಾಗುತ್ತಾರೆ. ಆ ಇಬ್ಬರು ಅಣ್ಣ-ತಮ್ಮಂದಿರೇ ಯೋಗ-ಭೋಗ ನಂದೀಶ್ವರರಾಗಿದ್ದಾರೆ ಎಂಬ ನಂಬಿಕೆ ಇದೆ. ತಮ್ಮ ಯೋಗನಂದೀಶ್ವರನಾಗಿ ಬೆಟ್ಟದ ಮೇಲೂ ಅಣ್ಣ ಭೋಗನಂದೀಶ್ವರನಾಗಿ ಬೆಟ್ಟದ ಕೆಳಗೂ(ನಂದಿ ಗ್ರಾಮದಲ್ಲಿ) ನೆಲೆಸಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ.

ಇಂಥ ಐತಿಹಾಸಿಕ ಮಹತ್ವದ ಸ್ಥಳ ಮಾತ್ರವೇ ಆಗಿರದೆ ಕಲಾಪೂರ್ಣ ಈಶ್ವರನ ಸನ್ನಿಧಿಯ ಈ ಸ್ಥಳ ಬೆಂಗಳೂರಿನಿಂದ ಬೆಂಗಳೂರು-ಹೈದ್ರಾಬಾದ್ ರಸ್ತೆಯಲ್ಲಿ ಕೇವಲ 55 ಕಿ.ಮೀ ದೂರವಿದೆ. ಈ ಪ್ರೇಕ್ಷಣೀಯ ಸ್ಥಳ ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದಂತಿದೆ

*** 

ಐತಿಹಾಸಿಕ ಸ್ಥಳಗಳನ್ನು ಬಹಳಷ್ಟು ಜನ ನೋಡುವುದು ಒಂದೋ ಅವಸರ ಅವಸರದಲ್ಲಿ ಇಲ್ಲವೆ ತಾವೂ ಇಂಥದ್ದೊಂದನ್ನು ನೋಡಿದ್ದೇವೆ ಎಂದು ಹೇಳಿಕೊಳ್ಳುವ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳುವುದಕ್ಕೋಸ್ಕರ. ಆದರೆ ಇಂಥ ಸ್ಥಳಗಳಿಗೆ ಹೋಗುವ ಮುನ್ನ ಆಯಾ ಸ್ಥಳದ ಐತಿಹಾಸಿಕ ಹಿನ್ನಲೆ ಅಂದರೆ ಯಾವ ಕಾಲದಲ್ಲಿ ಕಟ್ಟಿಸಿದ್ದು ,ಯಾರು ಕಟ್ಟಿಸಿದ್ದು, ಯಾವ ಹಿನ್ನಲೆಯಲ್ಲಿ ಕಟ್ಟಿಸಿದ್ದು, ಅಲ್ಲಿನ ಸ್ಥಳ ಮಹಿಮೆ ಏನು? ಹಾಗು ವಿಶೇಷವಾಗಿ ಆ ಶಿಲ್ಪ ಕಲೆಯಲ್ಲಿರುವ ವಿಶೇಷತೆ ಗಳೇನು ಎಂಬುದರ ಬಗ್ಗೆ ತಿಳಿದುಕೊಂಡು ಹೋದರೆ ಅದರ ಮೇಲಿನ ಅಭಿಮಾನ ಹೆಚ್ಚುವುದಲ್ಲದೆ ನಮ್ಮ ನಾಡಿನ ಭವ್ಯ ಪರಂಪರೆಯ ಬಗ್ಗೆ ತಿಳಿದುಕೊಂಡಂತೆ ಆಗುತ್ತದೆ ಅಲ್ಲದೇ ನೋಡುವುದಕ್ಕೆ ಆಸಕ್ತಿಯೂ ಮೂಡುತ್ತದೆ. ಈಗಂತೂ ತಾಂತ್ರಿಕತೆ ಮುಂದುವರಿದಿರುವುದರಿಂದ ಮೊಬೈಲಗಳಲ್ಲಿ ಅಯಾ ಸ್ಥಳಗಳಿಗೆ ಸಂಬಂಧಿಸಿರುವ 'ಆಡಿಯೊ'ಗಳನ್ನು ಹಾಕಿಕೊಂಡು ನೋಡುತ್ತ ಹೋದರೆ ಮತ್ತಷ್ಟು ಸಂಗತಿಗಳ ಅರಿವಾಗಿ ನೋಡುವುದಕ್ಕೆ ಅಪ್ಯಾಯಮಾನವೆನ್ನಿಸುತ್ತದೆ. ಅಲ್ಲಿಲ್ಲಿ ಸಿಗುವ 'ಗೈಡ್'ಗಳು ಕೊಡುವ ಕೋಡಂಗಿ ವಿವರಣೆಗಳಿಗಿಂತ ಕರಾರುವಕ್ಕಾದ ಐತಿಹಾಸಿಕ ಸತ್ಯಗಳು ಗೊತ್ತಾಗುತ್ತವೆ. ಕೇವಲ ಕೈಬೆಳೆಣಿಕೆಷ್ಟು ಸ್ಥಳಗಳನ್ನು ಹೊರತು ಪಡಿಸಿ ಬಹಳಷ್ಟು ಕಡೆಗಳಲ್ಲಿ ಯಾವುದೆ ತರಹದ ವಿವರಣೆ ಹೇಳಲು ಯಾರೂ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ಸಹಾಯವಾಗುವಂತೆ ಹಲವಾರು ಐತಿಹಾಸಿಕ ಸ್ಥಳಗಳ ವಿವರಣೆಗಳೊಗೊಂಡ ಆಡಿಯೊ ಫೈಲಗಳಿಗಾಗಿ ಇಲ್ಲಿ ಭೇಟಿ ನೀಡಿ ಡೌನ್ಲೋಡ್ ಮಾಡಿಕೊಳ್ಳಿ. ( http://bit.ly/kannadaaudiofilesall ) 

ಕಲಾಗಾರ: `ನುಗ್ಗೆಹಳ್ಳಿ ದೇವಸ್ಥಾನಗಳು'


ಹೊಯ್ಸಳ ಶಿಲ್ಪಕಲೆಯ ಅದ್ಭುತ ಕಣಜವೇ ನಮ್ಮ ಕರ್ನಾಟಕದಲ್ಲಿದೆ. ಅದರಲ್ಲೂ ಹಾಸನ ಜಿಲ್ಲೆಯಂತೂ ಹೊಯ್ಸಳ ಶಿಲ್ಪಕಲೆಯ ತವರೂರೆಂದರೂ ತಪ್ಪಾಗಲಾರದು. ಬೇಲೂರು ಹಳೆಬೀಡುಗಳಂತು ಸರಿಯೆ. ಅವು ಜಾಗತಿಕ ಮಟ್ಟದಲ್ಲೂ ಪ್ರಸಿದ್ಧಿ ಪಡೆದಿವೆ. ಇವುಗಳಲ್ಲದೆ ಮೂಲೆಯ ಮೂಲೆಯ ಹಳ್ಳಿಗಳಲ್ಲೂ ಶಿಲ್ಪಕಲೆ ಹಾಸು ಹೊಕ್ಕಾಗಿ ಅರಳಿ ನಿಂತಿರುವುದು ಕಾಣಬರುತ್ತದೆ. ಕಲ್ಲರಳಿ ಹೂವಾಗಿ ಎಂಬಂತೆ ನುಗ್ಗೆಹಳ್ಳಿಯ ಲಕ್ಷ್ಮಿನರಸಿಂಹ ದೇವಾಲಯ ಮತ್ತು ಸದಾಶಿವ ದೇವಾಲಯಗಳ ಕಲಾತ್ಮಕತೆ ಕಣ್ತುಂಬಿಕೊಳ್ಳುವಂತಿವೆ.ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದಿಂದ 15 ಕಿಮೀ ದೂರದಲ್ಲಿರುವ ಈ ನುಗ್ಗೆಹಳ್ಳಿ ಶಿಲ್ಪಕಲಾರಾಧಕರನ್ನು ಕೈಬೀಸಿ ಕರೆಯುತ್ತದೆ.

ಇತಿಹಾಸ: ನುಗ್ಗೆಹಳ್ಳಿ ಹೆಸರೆ ಸೂಚಿಸುವಂತೆ ಈಗ ಚಿಕ್ಕ ಹಳ್ಳಿಯಾಗಿದ್ದರೂ ಹೊಯ್ಸಳರ ಕಾಲದಲ್ಲಿ ಇದೊಂದು ಪ್ರಮುಖ ಅಗ್ರಹಾರವಾಗಿತ್ತು. 1246ರಲ್ಲಿ ಹೊಯ್ಸಳ ದೊರೆ ಸೋಮೆಶ್ವರನ ದಂಡನಾಯಕನಾದ ಬೊಮ್ಮಣ್ಣನೆಂಬುವವ ಈ ಅಗ್ರಹಾರ ನಿರ್ಮಿಸಿದ ಎಂದು ಶಾಸನಗಳು ತಿಳಿಸುತ್ತವೆ. ಅಲ್ಲದೆ ಈತನ ಹಿರಿಯಕ್ಕ ಲಕ್ಕವ್ವೆ ಎಂಬುವವಳು ಅಲ್ಲೆ ಬ್ರಾಹ್ಮಣರಿಗಾಗಿ ಅಗ್ರಹಾರ ನಿರ್ಮಿಸುತ್ತಾಳೆ. ಈ ಊರಿನ ನಾಲ್ಕು ದಿಕ್ಕಿಗೂ ಮಹಾದ್ವಾರಗಳು ಇದ್ದವಂತೆ. ಈಗ ಅವುಗಳಾವು ಉಳಿದಿಲ್ಲ.ಕಾಲನ ಸೆಳೆತದಲ್ಲಿ ಅವೆಲ್ಲ ನಾಶವಾಗಿಹೋಗಿವೆ. ಅದೊಂದು ಕಾಲದಲ್ಲಿ ಅತ್ಯಂತ ವೈಭಯುತವಾಗಿ ಮೆರೆದದ್ದು ಎದ್ದು ಕಾಣುತ್ತದೆ. ಇಲ್ಲಿಯ ಎರಡು ದೇವಾಲಯಗಳನ್ನು ದ್ರಾವಿಡ ಶೈಲಿಯ ವಾಸ್ತುವಿನಲ್ಲಿ ಬಳಪದ ಕಲ್ಲನ್ನು ಬಳಸಿ ಕಟ್ಟಲಾಗಿದೆ. ಇಲ್ಲಿ ಮುಖ್ಯವಾಗಿ ಶಿವ ಹಾಗು ವಿಷ್ಣುವಿನ ದೇವಾಲಯಗಳಿವೆ.ಗಮನಿಸಬೇಕಾದ ಸಂಗತಿಯೆಂದರೆ ಇವೆರಡು ದೇವಾಲಯಗಳನ್ನು ಕೇವಲ 2-3 ವರ್ಷಗಳ ಅಂತರದಲ್ಲಿ ಕಟ್ಟಲಾಗಿದೆ. ಇಂತಹ ಅದ್ಭುತ ಅದ್ಭುತ ಕೆತ್ತನೆಯ ದೇವಾಲಯಗಳ ನಿರ್ಮಾಣವನ್ನು ಒಂದರ ಹಿಂದೆ ಮತ್ತೊಂದರಂತೆ ಕಟ್ಟಿಮುಗಿಸಿರುವುದು ಆಶ್ಚರ್ಯವೇ ಸರಿ. 1246ರಲ್ಲಿ ಲಕ್ಷ್ಮಿನರಸಿಂಹ ದೇವಾಲಯ ಮತ್ತು 1249ರಲ್ಲಿ ಸದಾಶಿವನ ದೇವಾಲಯ ಕಟ್ಟಲಾಯ್ತೆಂದು ತಿಳಿದು ಬರುತ್ತದೆ. ಮುಂದೆ ಕಾಲಾನುಕ್ರಮದಲ್ಲಿ ಅಂದರೆ ವಿಜಯನಗರ ಅರಸರ ದಂಡನಾಯಕನಾದ ಗುಂಡಪ್ಪನಾಯಕ ಎಂಬುವವನ ಕಾಲದಲ್ಲಿ ಈ ದೇವಸ್ಥಾನಗಳು ಜೀರ್ಣೋದ್ಧಾರಗೊಂಡಿರುವ ಬಗ್ಗೆ ಶಾಸನದ ಉಲ್ಲೇಖವಿದೆ.

ಲಕ್ಷ್ಮಿನರಸಿಂಹ ದೇವಾಲಯ:
ಇದೊಂದು ತ್ರಿಕೂಟಾಚಲ ದೇವಾಲಯ. ಮೂರು ಗರ್ಭಗುಡಿಗಳಿಗೆ ಸಾಮಾನ್ಯವಾದ ನವರಂಗವಿದೆ. ದೇವಸ್ಥಾನದ ಸುತ್ತಲೂ ಪ್ರಾಕಾರವಿದ್ದು ಇಂದಿಗೂ ಉತ್ತಮ ಸ್ಥಿತಿಯಲ್ಲಿದೆ. 3ಅಡಿ ಎತ್ತರದ ಜಗತಿ ಮೇಲೆ ನಿರ್ಮಾಣಗೊಂಡಿರುವ ದೇವಸ್ಥಾನ ಅನೇಕ ಆಕರ್ಷಕ ಕೆತ್ತನೆಯ ಕಲಾತ್ಮಕ ಪಟ್ಟಿಕೆಗಳಿಂದ ಕೂಡಿದೆ. ಮೊದಲ ಪಟ್ಟಿಕೆಯಲ್ಲಿ ಸಾಲುಗಟ್ಟಿ ಮುನ್ನುಗ್ಗುತ್ತಿರುವ ಆನೆಗಳು, ಅದರ ಮೇಲಿನ ಸಾಲಿನಲ್ಲಿ ಯುದ್ಧೋತ್ಸಾಹದಲ್ಲಿರುವ ಕುದುರೆಗಳ ಸಾಲು, ಅದರ ಮೇಲಿನ ಸಾಲಿನಲ್ಲಿ ಹೂ-ಬಳ್ಳಿಗಳ ಸುಂದರ ಕೆತ್ತನೆ ಮನಸೂರೆಗೊಳ್ಳುವಂತಿದೆ. ಸುಕನಾಸಿ, ನವರಂಗ, ಸಭಾಮಂಟಪಗಳ ಜೊತೆಗೆ ಮುಂಭಾಗದಲ್ಲಿ ಚಿಕ್ಕ ಮುಖ ಮಂಟಪವಿದೆ. ಇದಲ್ಲದೆ ಪಾತಾಳಂಕಣವೊಂದಿದ್ದು ಇದು ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಲಾಗಿದೆ. ಮುಖ್ಯ ಗರ್ಭಗುಡಿಯಲ್ಲಿ ಮುದ್ದಾದ ಕೇಶವನ ಮನಮೋಹಕ ಮೂರ್ತಿ ಇದೆ. ಇದು ನಾಲ್ಕುವರೆ ಅಡಿ ಎತ್ತರದ ಗರುಡ ಪೀಠದ ಮೇಲೆ ಅಧಿಷ್ಠಾನಗೊಂಡಿದೆ. ದೇವರ ಸುತ್ತಲಿರುವ ಪ್ರಭಾವಳಿಯಲ್ಲಿ ದಶಾವತಾರದ ಕೆತ್ತನೆ ಇದೆ. ಉಳಿದಂತೆ ಉತ್ತರ ಭಾಗದ ಗರ್ಭ ಗುಡಿಯಲ್ಲಿ ಲಕ್ಷ್ಮಿನರಸಿಂಹ ಹಾಗು ದಕ್ಷಿಣ ಭಾಗದ ಗರ್ಭ ಗೃಹದಲ್ಲಿ ತ್ರಿಭಂಗಿಯಲ್ಲಿರುವ ವೇಣುಗೋಪಾಲ ಮೂರ್ತಿ ಇದೆ. ಇವುಗಳ ಪ್ರಭಾವಳಿಯಲ್ಲಿ ಕೂಡ ದಶಾವತಾರದ ಕೆತ್ತನೆಗಳಿವೆ. ತ್ರಿಕೂಟಾಚಲವಾದ ಈ ದೇವಾಲಯದ ಮೂರು ಗರ್ಭಗುಡಿಗಳೂ ಒಂದೇ ಅಳತೆಯವು ಹಾಗು ಆಕಾರವನ್ನು ಹೊಂದಿರುವುದೊಂದು ವಿಶೇಷ.
ಸುಕನಾಸಿ:ಇದು ಗರ್ಭಗೃಹದಷ್ಟೇ ವಿಶಾಲವಾಗಿದೆ. ಇಲ್ಲಿ ಯೋಗೀಶ್ವರ ವಿಷ್ಣುವಿನ ಮೂರ್ತಿ ಇದೆ. ಭುವನೇಶ್ವರಿಯಲ್ಲಿ ಸುಂದರವಾದ ಲತಾ-ಬಳ್ಳಿಗಳ ಕೆತ್ತನೆಯಿದೆ. ಆದಿಶೇಷನ ಮೇಲೆ ಕಾಲನ್ನು ಇಳಿಬಿಟ್ಟು ಕುಳಿತ ಅಮರನಾರಾಯಣನ ಶಿಲ್ಪ ಮನಸೆಳೆಯುತ್ತದೆ.
ನವರಂಗ: ಮೂರು ಗರ್ಭಗುಡಿಗಳಿಗೆ ಎದುರಾಗಿ ನವರಂಗವಿದೆ. ಹೊಯ್ಸಳ ದೇವಾಲಯಗಳ ಸಾಮಾನ್ಯ ನೋಟದಂತೆ ನವರಂಗದ ಮಧ್ಯದಲ್ಲಿ ದುಂಡುಬಳೆಯ ನಾಲ್ಕು ಕಂಬಗಳಿವೆ. ಇಲ್ಲೇ 3ಅಡಿ ಎತ್ತರದ ಗಣೇಶ ಮತ್ತು ಮಹಿಷಾಸುರಮರ್ದಿನಿ ಶಿಲ್ಪಗಳಿವೆ. ಎಲ್ಲ ಭುವನೇಶ್ವರಿಗಳಲ್ಲಿ ಪದ್ಮ ಮಂಡಲದ ಕೆತ್ತನೆಯಿದ್ದು ಮಧ್ಯದಲ್ಲಿ ಇಳಿಬಿದ್ದಿರುವ ಮೊಗ್ಗು(ಪದ್ಮಶಿಲಾ) ತುಂಬ ಆಕರ್ಷಕವಾಗಿದೆ. ಇದು ಶಿಲ್ಪಿಯ ಶಿಲ್ಪ ಕಲಾಪ್ವ್ರೌಢಿಮೆಗೆ ಸಾಕ್ಷಿಯಾಗಿದೆ.
ಪಾತಾಳಾಂಕಣ: ಇದರ ನಿರ್ಮಿತಿ ಮೊದಲೇ ಹೇಳಿದಂತೆ ವಿಜಯನಗರ ಕಾಲದಲ್ಲಿ ಗುಂಡಪ್ಪನಾಯಕನೆಂಬ ದಂಡನಾಯಕನೆಂಬುವವನಿಂದ ಆಗಿದೆ. 3x3.6 ಅಡಿಯ 30 ಅಡಿ ಉದ್ದವಿರುವ ಪಾತಾಳಾಂಕಣವಿದು. ಸೋಪಾನಕ್ಕೆ ಮೊದಲು ಎದುರುಗೊಳ್ಳುವ ಎರಡು ಕಡೆಗಿರುವ ಆನೆಗಳ ಶಿಲ್ಪಗಳು ಅತ್ಯಾಕರ್ಷಕವಾಗಿವೆ. ಇವುಗಳು ಮಾತ್ರ ಹೊಯ್ಸಳ ಕಾಲದವೇ ಆಗಿವೆ. ಬಹುಶ: ಬೇರೆಲ್ಲೋ ಕಡೆಯಿಂದ ತಂದಿಟ್ಟಿರಬಹುದು.
ಅಧಿಷ್ಠಾನ: ಮೂರು ಅಡಿ ಎತ್ತರದ ಅಧಿಷ್ಠಾನವನ್ನು ನೋಡುವುದೇಮನಸ್ಸಿಗೆ ಮುದಕೊಡುವಂತಹುದು. ಒಟ್ಟು ಆರು ಪಟ್ಟಿಕೆಗಳನ್ನು ಹೊಂದಿದ್ದು ಗಜ,ಅಶ್ವ ಹಾಗು ಲತಾ ಪಟ್ಟಿಕೆಗಳು ಒಂದರ ಮೇಲೊಂದು ಇವೆ. ಲತಾ ಪಟ್ಟಿಕೆಯ ಮಧ್ಯದಲ್ಲಿ ಹಂಸ, ಕೋತಿ, ಮಕರ ಶಿಲ್ಪಗಳು ಕಂಡುಬರುತ್ತವೆ. ನಾಲ್ಕನೇ ಪಟ್ಟಿಕೆ ಕಥಾನಕ ಶಿಲ್ಪ ಪಟ್ಟಿಕೆ. ಇದರಲ್ಲಿ ಭಾಗವತ ಕಥೆಯನ್ನು ವಿವರವಾಗಿ ಕೆತ್ತಲಾಗಿದೆ. ಕೃಷ್ಣ ಬಾಯಲ್ಲಿ ಬ್ರಹ್ಮಾಂಡ ತೋರಿಸುತ್ತಿರುವುದು, ಕೃಷ್ಣನನ್ನು ಅವನ ಕುಚೇಷ್ಟೆಗಳಿಗೆ ಯಶೋದೆ ದಂಡಿಸುತ್ತಿರುವುದು, ಪೂತನಿಯ ಸಂಹಾರ ಮುಂತಾದವುಗಳನ್ನು ಕೆತ್ತಲಾಗಿದೆ. ಐದನೇ ಪಟ್ಟಿಕೆ ಮಕರ ಪಟ್ಟಿಕೆಯಾಗಿದ್ದು ಸುಂದರವಾಗಿದೆ. ಆರನೇದ್ದು ಹಾಗು ಕೊನೆಯದಾದ ಈ ಪಟ್ಟಿಕೆ ಹಂಸ ಪಟ್ಟಿಕೆ. ಈ ತರಹದ ಅಲಂಕಾರಿಕ ದೇವ ಪಟ್ಟಿಕೆಗಳು ಚಾಲುಕ್ಯರ ಕಾಲದಲ್ಲೂ ಇದ್ದವು. ಆದರೆ ಹೊಯ್ಸಳರ ಕಾಲಕ್ಕೆ ಮೈದುಂಬಿ ಅರಳಿನಿಂತಿರುವುದನ್ನು ಕಾಣುತ್ತೇವೆ.

ಭಿತ್ತಿ ಶಿಲ್ಪಗಳು: ಅಧಿಷ್ಠಾನದ ಮೇಲೆ (ನಕ್ಷತ್ರಾಕಾರವಾಗಿರಬಹುದು ಅಥವಾ ಬೇರಾವುದೆ ತೆರನದ್ದಾಗಿರಬಹುದು) ಅನೇಕ ಅಲಂಕೃತ ಪಟ್ಟಿಕೆಗಳ ಮೇಲೆ ದೇವಸ್ಥಾನದ ಸುತ್ತಲೂ ನಿಲ್ಲಿಸಲ್ಪಡುವ ಈ ದೇವಪಟ್ಟಿಕೆಗಳು ದೇವಸ್ಥಾನವನ್ನು ನೋಡಲು ಮತ್ತಷ್ಟು ಮನೋಹರವಾಗುವಂತೆ ಮಾಡುತ್ತವೆ. ಅಂತಹ ಅತ್ಯಂತ ಸುಂದರವಾದ ಅಲಂಕೃತ ಶಿಲ್ಪಗಳನ್ನು ಈ ದೇವಾಲಯವೂ ಹೊಂದಿದೆ. ಇದು ವೈಷ್ಣವ ದೇವಾಲಯವಾದ್ದರಿಂದ ವೈಷ್ಣವ ದೇವತೆಗಳ ಮೂರ್ತಿಗಳನ್ನು ಕುಂಡರಿಸಲಾಗಿದೆ. ದೇವಾಲಯವನ್ನು ಒಂದು ಸುತ್ತು ಹಾಕಿದರೆ ವಿಷ್ಣುವಿನ 24 ಅವತಾರಗಳ ದರ್ಶನವಾಗುತ್ತದೆ. ಅಷ್ಟೇ ಅಲ್ಲದೆ ಮಧ್ಯ ಮಧ್ಯ ಭಾಗವತದ ಮತ್ತು ಪೌರಾಣಿಕ ದೇವ-ದೇವತೆಗಳ ಪುಣ್ಯ ದರ್ಶನವೂ ಆಗುತ್ತದೆ. ಇಲ್ಲಿನ ಮತ್ತೊಂದು ವಿಶೇಷತೆಯೆಂದರೆ ಪ್ರತಿಯೊಂದು ಮೂರ್ತಿಯ ಕೆಳಗೆ ಆ ದೇವತಾ ಮೂರ್ತಿಯ ಹೆಸರು ಹಾಗು ಕೆತ್ತಿದ ಶಿಲ್ಪಿಯ ಹೆಸರನ್ನು ಕೆತ್ತಿರುವುದು. ದೇವಾಲಯದ ಎಡಭಾಗದಿಂದ ಪ್ರದಕ್ಷಿಣೆ ಬರುವಾಗ ಕಂಡುಬರುವಂತೆ ಶಿಲ್ಪಗಳ ವಿವರ ಹೀಗಿದೆ:
1ನೇ ಭಾಗದಲ್ಲಿ- ಕಲ್ಪವೃಕ್ಷ, ಮೋಹಿನಿ, ದಕ್ಷಿಣಾಮೂರ್ತಿ ಹಾಗು ಕೇಶವನ ಶಿಲ್ಪಗಳಿವೆ.
2ನೇ ಭಾಗದಲ್ಲಿ- ಚೂಪಾದ ಗಡ್ಡ ಹೊಂದಿರುವ ಬ್ರಹ್ಮ (ಎದ್ದು ಕಾಣುತ್ತಿರುವ ಜನಿವಾರ ಗಮನಿಸಿ), ಬಹುಬೀಜ ಫಲವನ್ನು
ಕೈಯಲ್ಲಿ ಹಿಡಿದಿರುವ ಸ್ತ್ರೀ ದೇವತೆ, ನಾರಾಯಣ, ಪಕ್ಕದಲ್ಲಿ ಗರುಡ, ನಗ್ನ ಸ್ತ್ರೀ ಶಿಲ್ಪ, ತಲೆ ಮೇಲೆಕುಲಾವಿ, ಉದ್ದನೆ ನಿಲುವಂಗಿ ಧರಿಸಿರುವ ದಕ್ಷಿಣಾಮೂರ್ತಿ(ಕೆಲವೊಂದು ಊಹೆಯ ಪ್ರಕಾರ ಇದು ಕಾಳಾಮುಖ ಯತಿಯೊಬ್ಬನ ಶಿಲ್ಪವಿರಬಹುದೆಂಬ ವಾದವಿದೆ.) ಶಿಲ್ಪಗಳಿವೆ.
3ನೇ ಭಾಗದಲ್ಲಿ: ಉಯ್ಯಾಲೆಯಲ್ಲಿರುವ ಕೃಷ್ಣ-ರುಕ್ಮಿಣಿಯರು, ಇದರ ಹಗ್ಗದ ಕೆತ್ತನೆ ಕುಸುರಿ ಕಲಾತ್ಮಕವಾಗಿದೆ, ರತಿ-ಮನ್ಮಥ, ಅಶ್ವಮುಖಿ ಹಯಗ್ರೀವ, ಮಾಧವ-ಲಕ್ಷ್ಮಿ,ಹಾಗು ನಾಟ್ಯ ಗಣಪತಿ.
4ನೇ ಭಾಗದಲ್ಲಿ: ಏಳು ಹೆಡೆ ಶೇಷನ ಮೇಲೆ ಕುಳಿತ ಅಮರನಾರಾಯಣ, ಪರವಾಸುದೇವ ಅಥವಾ ಆದಿ ಮೂರ್ತಿ, ಮಾಧವ, ಯೋಗನರಸಿಂಹ, ಪಕ್ಕದಲ್ಲಿ ಶ್ರೀದೇವಿ-ಭೂದೇವಿ ಹಾಗು ಪ್ರಹ್ಲಾದ, ವರದರಾಜ ಶಿಲ್ಪಗಳಿವೆ.
5ನೇ ಭಾಗದಲ್ಲಿ: ಹರಿಹರ, ಮಧಸೂದನ, ಪಕ್ಕದಲ್ಲಿ ಲಕ್ಷ್ಮಿ, ವಾಮನ ಹಾಗು ವಿಷ್ಣುವಿನ ವಿಗ್ರಹಗಳು.
6ನೇ ಭಾಗದಲ್ಲಿ: ತ್ರಿವಿಕ್ರಮ, ನಾಗಕನ್ನಿಕೆ, ಭೈರವ (ಇದು ನಗ್ನವಾಗಿದ್ದು ರುಂಡದಿಂದ ಹನಿಯುತ್ತಿರುವ ರಕ್ತವನ್ನು ನಯಿಯೊಂದು ನೆಕ್ಕುತ್ತಿದೆ),ನಅಟ್ಯಭಂಗಿಯಲ್ಲಿರುವ ದುರ್ಗೆ, ವಾಮನ, ಶ್ರೀಧರ ಶಿಲ್ಪಗಳು.
7ನೇ ಭಾಗದಲ್ಲಿ: ಗೋವರ್ಧನ ಗಿರಿಧಾರಿ, ಉಗ್ರನರಸಿಂಹ, ಹೃಷಿಕೇಶ, ಮಹದೇವ, ಶ್ರೀದೇವಿ-ಭೂದೇವಿಯರು, ನರಸಿಂಹ ಹಾಗು ದುರ್ಗಿಯರು.
8ನೇ ಭಾಗದಲ್ಲಿ: ಪದ್ಮನಾಭ, ವೇಣುಗೋಪಾಲ, ಸೂರ್ಯ, ದಾಮೋದರ, (ಸೂರ್ಯ ಪದ್ಮಪಾಣಿಯಾಗಿ ಸಪ್ತ ಕುದುರೆ ಏರಿದ್ದಾನೆ ಹಾಗು ಅಕ್-ಪಕ್ಕದಲ್ಲಿ ಉಷೆ-ಪ್ರತ್ಯುಷೆಯರಿದ್ದಾರೆ), ವೇಣುಗೋಪಾಲ.
9ನೇ ಭಾಗದಲ್ಲಿ: ಲಕ್ಷ್ಮಿ ಸಹಿತ ವಿಷ್ಣು, ಹರಿಹರ, ಪದ್ಮಾಸನದಲ್ಲಿರುವ ಪಾರ್ವತಿ, ಪಕ್ಮಾಸನದಲ್ಲಿರುವ ಲಕ್ಷ್ಮಿ, ಸರಸ್ವತಿ ಶಿಲ್ಪಗಳು ತುಂಬ ಅಲಂಕಾರಿಕವಾಗಿವೆ.
10ನೇ ಭಾಗದಲ್ಲಿ: ಸಂಕರ್ಷಣ, ಆನೆ ಮೇಲೆ ಕುಳುತಿರುವ ಇಂದ್ರ-ಶಚಿ, ಗರುದವಾಹನ ಕೃಷ್ಣ-ಸತ್ತೆಭಾಮೆ, ವಾಸುದೇವ.
11ನೇ ಭಾಗದಲ್ಲಿ: ಪ್ರದ್ಯುಮ್ನ-ಗರುಡ ಪೀಠದ ಮೇಲಿರುವಂತೆ ಹಾಗು ಪಕ್ಕದಲ್ಲಿ ವರಾಹ ಶಿಲ್ಪವಿದೆ, ಅಲ್ಲದೆ ಕೈಯೊಂದರಿಂದ ಭೂದೇವಿಯ ಕಾಲು ಹಿಡಿದಿದ್ದಾನೆ, ವೇಣುಗೋಪಾಲ.
12ನೇ ಭಾಗದಲ್ಲಿ: ಗರುಡ ಹಾಗು ಉಷೆಯೊಂದಿಗೆ ಅನಿರುದ್ಧ, (ನಾಟ್ಯ ಭಂಗಿಯಲ್ಲಿರುವ ಈ ಉಷೆಯ ಕೆತ್ತನೆ ಇಡೀ ದೇವಾಲಯದ ಎಲ್ಲ ಶಿಲ್ಪಗಳಲ್ಲೇ ತುಂಬ ಕಲಾತ್ಮಕವಾಗಿದೆ), ನೇಗಿಲು ಹೊತ್ತ ಬಲರಾಮ, ಅಷ್ಟಭುಜದ ನಾಟ್ಯಲಕ್ಷ್ಮಿ, ಮಹಿಷಮರ್ದಿನಿ, ಕಾಳಿಂಗ ಸರ್ಪದೊಂದಿಗೆ ನಾಟ್ಯವಾಡುವ ಮೋಹಿನಿಹ ನಗ್ನ ಶಿಲ್ಪ, ಅಧೋಕ್ಷಜ ಶಿಲಪವಿದೆ.
13ನೇ ಭಾಗದಲ್ಲಿ: ಕಾಳಿಂಗ ಮರ್ದನ ಕೃಷ್ಣ, ನರಸಿಂಹ, ಮತ್ಸ್ಯಯಂತ್ರ ಭೇದಿಸುತ್ತಿರುವ ಅರ್ಜುನ, ಪಕ್ಕದಲ್ಲಿ ದ್ರೌಪದಿ.
14ನೇ ಭಾಗದಲ್ಲಿ: ಲಕ್ಷ್ಮಿ, ದಕ್ಷಿಣಾಮೂರ್ತಿ, ಪಕ್ಕದಲ್ಲಿ ಮೋಹಿನಿಯ ವಸ್ತ್ರವನ್ನು ಕೋತಿಯೊಂದು ಎಳೆಯುತ್ತಿರುವಂತೆ ಹಾಗು ಅಮನ್ನವಳು ಜಾರದಂತೆ ಹಿಡಿಯುತ್ತಿರುವುದು, ಅಚ್ಯುತ, ಪರಶುವನ್ನ ಹಿಡಿದ ದ್ವಿಭುಜ ಪರಶುರಾಮ, .ನಾರಾಣ, ಜನಾರ್ಧನ.
15ನೇ ಭಾಗದಲ್ಲಿ: ಅಶ್ವಮುಖಿ ಹಯಗ್ರೀವ, ತ್ರಿಭಂಗಿಯಲ್ಲಿರುವ ಸ್ತ್ರೀ ಶಿಲ್ಪ, ಉಪೇಂದ್ರ, ಕೋದಂಡರಾಮ+ಸೀತೆ+ಲಕ್ಷ್ಮಣ, ಹನುಮಂತ.
16ನೇ ಭಾಗದಲ್ಲಿ: ಹರಿ ಹಾಗು ಪದ್ಮಾಸನದಲ್ಲಿ ಕುಳಿತಿತುವ ವಿಷ್ಣು.
17ನೇ ಭಾಗದಲ್ಲಿ: ಕೃಷ್ಣ ಪಕ್ಕದಲ್ಲಿ ಲಕ್ಷ್ಮಿ ಮತ್ತು ಕಾಮಧೇನು. ಕಾಮಧೇನುವಿನ ಸೂಕ್ಷ್ಮ ಕೆತ್ತನೆಗಳು ಗಮನಾರ್ಹ.
ಶಿಖರಗಳು: ತ್ರಿಕೂಟಾಚಲವಾದ ಇಲ್ಲಿ ಮೂರು ಗರ್ಭ ಗುಡಿಗಳ ಮೇಲೆ ಔತ್ತರೇಯ ಸಂಪ್ರದಾಯದ ಭೂಮಿಜ ಶೈಲಿಯ ಮೂರು ಗೋಪುರಗಳಿವೆ. ಇದೇ ತರಹದ ಗೋಪುರಗಳು ಲಕ್ಕುಂಡಿಯ ಕಾಶಿ ವಿಶ್ವನಾಥ ಮತ್ತು ಅಮೃತಾಪುರದ ಅಮೃತೇಶ್ವರ ದೇವಾಲಯಗಳ ಮೇಲೂ ಇವೆ. ಇವುಗಳು ಬಾಗಿದ ಆಕಾರದಲ್ಲಿದ್ದು ಘಂಟಾ ರಚನೆಯನ್ನು ಹೊಂದಿವೆ. ಇವುಗಳಲ್ಲಿ ಪಶ್ಚಿಮದ ಶಿಖರವನ್ನು ಸ್ವಲ್ಪ ಮೊದಲು ಕಟ್ಟಲಾಗಿದ್ದು ಉತ್ತರ ಹಾಗು ದಕ್ಷಿಣದ ಶಿಖರಗಳನ್ನು ೧೭ನೇ ಶತಮಾನದಲ್ಲಿ ಇಟ್ಟಿಗೆ-ಗಾರೆಗಳಿಂದ ಕಟ್ಟಿರುವುದು ಕಂಡುಬರುತ್ತದೆ.


ಸದಾಶಿ(ಚಂದ್ರಮೌಳೇಶ್ವರ) ದೇವಾಲಯ:
ಪೂರ್ವ ದಿಕ್ಕಿಗೆ ಅಭಿಮುಖವಾಗಿರುವ ಈ ಸುಂದರ ದೇಸ್ಥಾನ ದ್ವಿಕೂಟಾಚಲ ಮಾದರಿಯದ್ದು. ಹೊಯ್ಸಳ ದೊರೆ ಸೋಮೇಶ್ವರನ ಸಂದಿವಿಗ್ರಹಿಯಾದ ಬೊಬ್ಬಣ ದಂಡನಾಯಕ ಎಂಬುವವನು 1249 ಈ ದೇವಸ್ಥಾನವನ್ನು ಕಟ್ಟಿಸಿದನೆಂಬ ಮಾಹಿತಿ ಇದೆಯಾದರೂ ವಾಸ್ತು ಲಕ್ಷಣ ನೋಡಿದರೆ ಪೂರ್ವ ಹೊಯ್ಸಳ ಕಾಲದ್ದಿರಬಹುದೆಂಬುದು ಇತಿಹಾಸಜ್ಞರ ಅಭಿಪ್ರಾ. ಬಳಪದ ಕಲ್ಲಿನಲ್ಲಿ ನಿರ್ಮಿಸಲಾದ ಈ ದೇವಾಲಯದ ಶಿಖರ ನಾಗರ ಶೈಲಿಯಲ್ಲಿರುವುದೊಂದು ವಿಶೇಷ. ಏಕೆಂದರೆ ಕೇವಲ ಎರಡು ವರ್ಷ ಮಾತ್ರ ಮೊದಲು ಕಟ್ಟಲಾಗಿರುವ ಪಕ್ಕದಲ್ಲೇ ಇರುವ ಲಕ್ಷ್ಮಿನರಸಿಂಹ ದೇವಾಲಯದ ಗೋಪುರವು ವೇಸರ ಶೈಲಿಯಲ್ಲಿದ್ದು ಇದು ಮಾತ್ರ ನಾಗರ ಶೈಲಿಯಲ್ಲಿದೆ. ಈ ದೇವಸ್ಥಾನವನ್ನು ಕೂಡ ಜಗತಿಯ ಮೇಲೆ ನಿರ್ಮಿಸಿದ್ದು ಗರ್ಭಗೃಹ, ಸುಕನಾಸಿ, ನವರಂಗ ಮತ್ತು ನಂದಿ ಮಂಟಪಗಳನ್ನು ಹೊಂದಿದೆ. ತೆರೆದ ಸುಕನಾಸಿಯಿದ್ದು ಅದರಲ್ಲಿ 3 ಅಡಿ ಎತ್ತರದ ಗಣಪತಿ ಹಾಗು 2 ಅಡಿ ಎತ್ತರದ ಭೈರವನ ವಿಗ್ರಹಗಳಿವೆ. ಲಕ್ಷ್ಮಿನರಸಿಂಹ ದೇವಾಲಯದಂತೆ ಈ ದೇವಸ್ಥಾನದ ಮುಖಮಂಟಪ, ಪಾತಾಳಂಕಣ, ದೀಪಸ್ಥಂಬ ಹಾಗು ಮುಖ್ಯ ದ್ವಾರಗಳ ನಿರ್ಮಾಣ ವಿಜಯನಗರ ಕಾಲದಲ್ಲಿ ಮಾಡಲಾಗಿದೆ. ದೇವಾಲಯದ ಮುಖ್ಯ ಪ್ರವೇಶದ್ವಾರ ದಕ್ಷಿಣ ದಿಕ್ಕಿನೆಡೆಗಿದೆ.
ಜಗತಿ ಮತ್ತು ಅಧಿಷ್ಠಾನ: ಅಷ್ಟಕೋನಗಳುಳ್ಳ ನಕ್ಷತ್ರಾಕಾರದ ಜಗತಿ ಮೇಲೆ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಜಗತಿ 3 ಅಡಿ ಎತ್ತರವಿದ್ದು ಪ್ರದಕ್ಷಿಣೆಗೆ ಅನುಕೂಲವಾಗಲೆಂಬಂತೆ 6 ಅಡಿ ಅಗಲಳತೆ ಹೊಂದಿದೆ. ಹಾಗೆಯೆ 4 ಅಡಿ ಎತ್ತರದ ಅಧಿಷ್ಠಾನವಿದ್ದು ಅಲಂಕರಣ ಪಟ್ಟಿಕೆಗಳನ್ನು ಹೊಂದಿಲ್ಲ.
ಹೊರಭಿತ್ತಿ: ಲಕ್ಷ್ಮಿನರಸಿಂಹ ದೇವಾಲಯದಂತೆ ಹೊರಭಿತ್ತಿಯು ಅಲಂಕರಣ ಪಟ್ಟಿಕೆಗಳನ್ನು ಹೊಂದಿರದಿದ್ದರೂ ಭಿತ್ತಿಯಲ್ಲಿರುವ ಸ್ಥಂಬಗಳು ಅಲಂಕೃತವಾಗಿದ್ದು ನೋಡಲು ಆಕಸರ್ಷಕವಾಗಿವೆ. ಅಲ್ಲೆ ಇರುವ ಭಗ್ನಗೊಂಡ ತ್ರಿಮುಖ ಬ್ರಹ್ಮ(?) ಶಿಲ್ಪವು ಗಮನ ಸೆಳೆಯುವಂತಿದೆ.
ಶಿಖರ: ಮೂರು ಹಂತದ ಇದರ ಶಿಖರವನ್ನು ಬಳಪದ ಕಲ್ಲಿನಲ್ಲಿ ನಿರ್ಮಿಸಲಾಗಿದೆ. ದ್ರಾವಿಡ ನಾಗರ ಶೈಲಿಯಲ್ಲಿರು ಈ ಶಿಖರದ ನಾಲ್ಕೂ ಮೂಲೆಗಳಲ್ಲಿ ಶಿವನ ವಾಹನಾದ ನಂದಿ ವಿಗ್ರಹಗಳು ಗಮನ ಸೆಳೆಯುತ್ತವೆ. ಹಾಗೆಯೆ ಹೊಯ್ಸಳ ಲಾಂಛನವಾದ(?) ಹುಲಿಯನ್ನು ಕೊಲ್ಲುತ್ತಿರುವ ಸಳನ ಕೆತ್ತನೆಯೂ ಇದೆ.
ಗರ್ಭಗೃಹ: ದ್ವಾರದ ಇಕ್ಕೆಲಗಳಲ್ಲಿ ಶೈವ ದ್ವಾರಪಾಲಕರಿದ್ದು 2 ಅಡಿ ಎತ್ತರದ ಪಾಣಿ ಪೀಠದ ಮೇಲೆ ಲಿಂವನ್ನು ಅಧಿಷ್ಠಾನಗೊಳಿಸಲಾಗಿದೆ.
ನವರಂಗ: ಒಂಬತ್ತು ಅಂಕಣದಷ್ಟು ದೊಡ್ಡದಿರುವ ಈ ನವರಂಗಕ್ಕೆ ಪೂರ್ವ ಹಾಗು ದಕ್ಷಿಣಕ್ಕೆ ಎರಡು ಪ್ರವೇಶ ದ್ವಾರಗಳಿವೆ. ಇದರ ಮಧ್ಯದಲ್ಲಿ ಅರ್ಧ ಅಡಿ ಎತ್ತರದ ಚೌಕಾಕಾರದ ಜಗತಿ ಇದ್ದು ಬಿಡಿ ಶಿಲ್ಪಗಳಾದ ಗಣಪತಿ, ಸಪ್ತ ಮಾತೃಕೆಯರು, ಮಹಿಷಾಸುರಮರ್ದಿನಿ, ಸುಬ್ರಮಣ್ಯ, ಸೂರ್ಯ ಹಾಗು ಕುಳಿತ ಭಂಗಿಯ ಮೀರಭದ್ರನ ಶಿಲ್ಪಗಳಿವೆ. ಈ ಶಿಲ್ಪದ ವಿಶೇಷತೆಯೆಂದರೆ ಸಾಮಾನ್ಯವಾಗಿ ವೀರಭದ್ರನ ಶಿಲ್ಪ ಎಲ್ಲಲ್ಲೂ ನಿಂತ ಭಂಗಿಯಲ್ಲಿರುತ್ತದೆ. ಆದರೆ ಇಲ್ಲಿರುವ ಈ ಶಿಲ್ಪ ಚೇಳಿನ ಮೇಲೆ ಕುಳಿತಿರುವಂತೆ ಕೆತ್ತಲಾಗಿದೆ. ಇಲ್ಲಿರುವ ಎಲ್ಲ 9 ಭುವನೇಶ್ವರಿಯಲ್ಲೂ ತುಂಬ ನಯಗಾರಿಕೆಯ ಕುಸುರಿ ಕೆತ್ತನೆ ಗಮನಸೆಳೆಯುವಂತಿವೆ. ಒಂದನೇ ಭುವನೇಶ್ವರಿಯಲ್ಲಿ ತಾಂಡವ ನೃತ್ಯಗೈಯುತ್ತಿರುವ ಶಿವ, ಅದರಲ್ಲೆ ಎಂಟೂ ದಿಕ್ಕುಗಳಲ್ಲಿ ಆಯಾ ದಿಕ್ಕುಗಳ ಅಧಿಪತಿಯರನ್ನು ಕೆತ್ತಲಾಗಿದೆ, ಎರಡನೇ ಭುವನೇಶ್ವರಿಯಲ್ಲಿ 16ಕೋನವುಳ್ಳ ನಕ್ಷತ್ರಾಕಾರದ ವೃತ್ತಗಳಿವೆ, ಮೂರನೇ ಭುವನೇಶ್ವರಿಯಲ್ಲಿ ಶ್ರೀಚಕ್ರ ಮಾದರಿಯ ಕೆತ್ತನೆಯಿದೆ, ನಾಲ್ಕನೇ ಭುವನೇಶ್ವರಿಯಲ್ಲಿ ಪದ್ಮದ ಸುಂದರೆ ಅಲಂಕರಣೆಯನ್ನು ಮಾಡಲಾಗಿದೆ, ಐದನೇ ಭುವನೇಶ್ವರಿಯಲ್ಲಿ ಶಿವನೊಂದಿಗೆ ಅಷ್ಟದಿಕ್ಪಾಲಕರನ್ನು ಕೆತ್ತಲಾಗಿದೆ, ಆರನೇ ಭುವನೇಶ್ವರಿಯಲ್ಲಿ ಕೆಳಭಾಗ ನಕ್ಷತ್ರಾಕಾರವಿದ್ದು ಒ<ಭಾಗ ವೃತ್ತಾಕಾರವಿರುವಂತೆ ಮಾಡಲಾಗಿದೆ, ಏಳನೇ ಭುವನೇಶ್ವರಿಯಲ್ಲಿ ಪದ್ಮ ಮಂಡಲವಿದ್ದು 8 ಮತ್ತು 9 ನೇ ಭುವನೇಶ್ವರಿಯಲ್ಲಿ ವೃತ್ತ ಹಾಗು ಚೌಕಾಕಾರದ ವಿನ್ಯಾಸಗಳಿವೆ.
ನಂದಿ ಮಂಟಪ: ಈ ಮಂಟಪದ ದ್ವಾರಬಂಧವು ಐದು ಸುಂದರವಾದ ಹಾಗು ವೈವಿಧ್ಯಮಯವಾದ ಕೆತ್ತನೆಯುಳ್ಳ ಪಟ್ಟಿಕೆಗಳಿಂದ ಕೂಡಿದೆ. ಇದರ ಮಧ್ಯೆ 4 ಅಡಿ ಎತ್ತರದ ಸುಂದರ ನಂದಿ ವಿಗ್ರಹವಿದೆ. ಇದೇ ರೀತಿಯ ನಂದಿ ಮಂಟಪಗಳು ಬಸರಾಳು ಹಾಗು ಅರಸಿಕೆಗೆಯಲ್ಲೂ ಕಾಣಸಿಗುತ್ತವೆ.
ಸಾಮಾನ್ಯವಾಗಿ ಹೊಯ್ಸಳರ ಕಾಲದಲ್ಲಿ ಸ್ತ್ರೀ ದೇವತೆಗೆ ಪ್ರತ್ಯೇಕ ದೇವಸ್ಥಾನ ಕಟ್ಟುವ ಪದ್ಧತಿ ಇರಲಿಲ್ಲ. ಆದರೂ ಈ ದೇವಾಲಯದ ನೈರುತ್ಯಕ್ಕೆ ಪಾರ್ವತಿ ಅಮ್ಮನವರ ದೇವಸ್ಥಾನವಿದೆ. ಬಹುಶ: ಇದು ವಿಜಯನಗರದ ಕಾಲಕ್ಕೆ ಕಟ್ಟಿಸಿದ್ದಿರಬೇಕು. ಇಲ್ಲಿರುವ ಕಂಬಗಳು ವಿಜಯನಗರ ಶೈಲಿಯದ್ದಾಗಿರುವುದು ಇದಕ್ಕೆ ಪುಷ್ಟಿ ಕೊಡುತ್ತದೆ. ಇಲ್ಲೊಂದೆಡೆ ಸೂರ್ಯ ಮತ್ತು ಸರ್ಪದ ಉಬ್ಬು ಕೆತ್ತನೆಯಿದ್ದು ಇದ್ದು ಹಳೆಯ ನಂಬಿಕೆಯಂತೆ ಗ್ರಹಣದ ಸಮಯದಲ್ಲಿ ಸರ್ಪ ಸೂರ್ಯ/ಚಂದ್ರರರುಗಳನ್ನು ನುಂಗುತ್ತದೆ ಎಂಬುದನ್ನು ಸಂಕೇತಿಸುವಂತಿದೆ

***
 
ಐತಿಹಾಸಿಕ ಸ್ಥಳಗಳನ್ನು ಬಹಳಷ್ಟು ಜನ ನೋಡುವುದು ಒಂದೋ ಅವಸರ ಅವಸರದಲ್ಲಿ ಇಲ್ಲವೆ ತಾವೂ ಇಂಥದ್ದೊಂದನ್ನು ನೋಡಿದ್ದೇವೆ ಎಂದು ಹೇಳಿಕೊಳ್ಳುವ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳುವುದಕ್ಕೋಸ್ಕರ. ಆದರೆ ಇಂಥ ಸ್ಥಳಗಳಿಗೆ ಹೋಗುವ ಮುನ್ನ ಆಯಾ ಸ್ಥಳದ ಐತಿಹಾಸಿಕ ಹಿನ್ನಲೆ ಅಂದರೆ ಯಾವ ಕಾಲದಲ್ಲಿ ಕಟ್ಟಿಸಿದ್ದು ,ಯಾರು ಕಟ್ಟಿಸಿದ್ದು, ಯಾವ ಹಿನ್ನಲೆಯಲ್ಲಿ ಕಟ್ಟಿಸಿದ್ದು, ಅಲ್ಲಿನ ಸ್ಥಳ ಮಹಿಮೆ ಏನು? ಹಾಗು ವಿಶೇಷವಾಗಿ ಆ ಶಿಲ್ಪ ಕಲೆಯಲ್ಲಿರುವ ವಿಶೇಷತೆ ಗಳೇನು ಎಂಬುದರ ಬಗ್ಗೆ ತಿಳಿದುಕೊಂಡು ಹೋದರೆ ಅದರ ಮೇಲಿನ ಅಭಿಮಾನ ಹೆಚ್ಚುವುದಲ್ಲದೆ ನಮ್ಮ ನಾಡಿನ ಭವ್ಯ ಪರಂಪರೆಯ ಬಗ್ಗೆ ತಿಳಿದುಕೊಂಡಂತೆ ಆಗುತ್ತದೆ ಅಲ್ಲದೇ ನೋಡುವುದಕ್ಕೆ ಆಸಕ್ತಿಯೂ ಮೂಡುತ್ತದೆ. ಈಗಂತೂ ತಾಂತ್ರಿಕತೆ ಮುಂದುವರಿದಿರುವುದರಿಂದ ಮೊಬೈಲಗಳಲ್ಲಿ ಅಯಾ ಸ್ಥಳಗಳಿಗೆ ಸಂಬಂಧಿಸಿರುವ 'ಆಡಿಯೊ'ಗಳನ್ನು ಹಾಕಿಕೊಂಡು ನೋಡುತ್ತ ಹೋದರೆ ಮತ್ತಷ್ಟು ಸಂಗತಿಗಳ ಅರಿವಾಗಿ ನೋಡುವುದಕ್ಕೆ ಅಪ್ಯಾಯಮಾನವೆನ್ನಿಸುತ್ತದೆ. ಅಲ್ಲಿಲ್ಲಿ ಸಿಗುವ 'ಗೈಡ್'ಗಳು ಕೊಡುವ ಕೋಡಂಗಿ ವಿವರಣೆಗಳಿಗಿಂತ ಕರಾರುವಕ್ಕಾದ ಐತಿಹಾಸಿಕ ಸತ್ಯಗಳು ಗೊತ್ತಾಗುತ್ತವೆ. ಕೇವಲ ಕೈಬೆಳೆಣಿಕೆಷ್ಟು ಸ್ಥಳಗಳನ್ನು ಹೊರತು ಪಡಿಸಿ ಬಹಳಷ್ಟು ಕಡೆಗಳಲ್ಲಿ ಯಾವುದೆ ತರಹದ ವಿವರಣೆ ಹೇಳಲು ಯಾರೂ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ಸಹಾಯವಾಗುವಂತೆ ಹಲವಾರು ಐತಿಹಾಸಿಕ ಸ್ಥಳಗಳ ವಿವರಣೆಗಳೊಗೊಂಡ ಆಡಿಯೊ ಫೈಲಗಳಿಗಾಗಿ ಇಲ್ಲಿ ಭೇಟಿ ನೀಡಿ ಡೌನ್ಲೋಡ್ ಮಾಡಿಕೊಳ್ಳಿ. ( http://bit.ly/kannadaaudiofilesall )